ಹೇ ಶಶಿ ಮುಖಿ ಹರಡಿರಲು
ನಿನ್ನ ಬೆಳದಿಂಗಳ ಛಾಯೆ
ಕಾಯುತಿರುವೆ ನಾ
ಬೆಟ್ಟ ಗುಡ್ಡಗಳ ಜತೆ
ವನಮಾಲೆಯ ಹಿಡಿದು
ಮೇಘಮಾಲೆಯ ದಿಬ್ಬಣದಿ
ನೀ ಬರುವೆಯೆಂದು
ಜಲಧಾರೆಯಲಿ ಮಿಂದು
ರವಿಯ ಕಿರಣವ ಪೂಸಿ
ಕಾನನ ಹೂಗಳ ಮುಡಿದು
ನಾ ವಧುವಾಗಿ ನಿಂತಿರಲು
ನಿನಗಾಗಿ ಕಾಯುತಿರುವ
ಬೆಳ್ಳಿ ಕಿರಣದ ಪಲ್ಲಕ್ಕಿಯಲಿ
ಬಿಳಿಯ ಮೋಡಗಳ ಜತೆ
ತಾರೆಗಳನೊಡಗೂಡಿ
ವರನಾಗಿ ನೀ ಬಾ
ನೋಡು..,
ಮಿಂಚು ಗುಡುಗು ಕಾಯುತಿವೆ
ಗಟ್ಟಿ ಮೇಳ ಬಾರಿಸಲು
ಬೆಳ್ಳಿ ಕಿರಣ ತೆರೆಸೀರೆಯಾಗಲು
ಹನಿಮಳೆಯು ಪನ್ನೀರು ಹಾಕಲು
ಹೂಲತೆಗಳು ನಾಟ್ಯವಾಡಲು
ಇನ್ನೇಕೆ ಈ ಅರಿಯದ ಕಾಯುವಿಕೆ?
ಬರಬಾರದೇ ಒಮ್ಮೆ ನನ್ನೆಡೆಗೆ
ಈ ನಿನ್ನ ಕಾದಿಹ ವಧುವಿನೆಡೆಗೆ
ನಿನ್ನ ಪ್ರಿಯೆ ಈ ಭುವಿಯೆಡೆಗೆ?
-ಕೇವಿ ಕುಂಜಾರು

ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು