ಬ್ರೇಕಿಂಗ್ ನ್ಯೂಸ್ ಬಂತೆಂದು ಖುಷಿಯಲ್ಲಿ ರಿಪೋರ್ಟರ್ ಕಿಚ್ಚು ಜತೆ ಕೆಮರಾ ಹೆಗಲಿಗಾತುಕೊಂಡು ಹೊರಟ ಸುರೇಶ್. ಈವತ್ತು ಅವನ ಜೀವನದಲ್ಲಿ ಖುಷಿಯ ದಿನ. ಯಾಕೆಂದರೆ ಅವನ ಮತ್ತು ಮುದ್ದು ಪತ್ನಿ ಸುಮಾಳ ಪ್ರಥಮ ವಿವಾಹ ವಾರ್ಷಿಕೋತ್ಸವ. ಆ ಪ್ರಯುಕ್ತ ಆತ್ಮೀಯರನ್ನೆಲ್ಲಾ ಕರೆದು ಒಂದು ಪಾರ್ಟಿಯನ್ನಿಟ್ಟುಕೊಂಡಿದ್ದ
ಸುರೇಶ್.
ಸುಮಾ ಬೆಳಿಗ್ಗೇನೇ ಈವತ್ತು ಬೇಗ ಬರುವಂತೆ ಹುಕುಂ ಹೊರಡಿಸಿದ್ದಳು.ಯಾವತ್ತೂ ಅವಳ ಕೋರಿಕೆಗೆ ಇಲ್ಲವೆನ್ನದ ಸುರೇಶ್ ಇಂದೇಕೋ ಲೇಟಾಗಬಹುದೇನೋ ಎಂಬ ಗಾಬರಿಯಲ್ಲಿದ್ದ.
ಆಕ್ಸಿಡೆಂಟ್ ಆದ ಜಾಗಕ್ಕೆ ತಲುಪಿದರೆ ರಸ್ತೆ ಮಧ್ಯೆ ಚಲ್ಲಾಪಿಲ್ಲಿಯಾಗಿ ರಕ್ತದ ಮಡುವಲ್ಲಿ ಬಿದ್ದಿತ್ತು ಹೆಂಗಸೊಬ್ಬಳ ಮೃತದೇಹ.ಚಕಚಕನೆ ತನ್ನ ಕ್ಯಾಮರಾದಿಂದ ಒಂದಷ್ಟು ಫೋಟೋ ಹೊಡೆದುಕೊಂಡ ಸುರೇಶ್.
ಅದು ಯಾರು ಏನು ಎಂದೆಲ್ಲ ತಿಳಿದುಕೊಳ್ಳುವಷ್ಟು ತಾಳ್ಮೆಯಿರಲಿಲ್ಲ ಅವನಲ್ಲಿ.ತನ್ನ ಕರ್ತವ್ಯ ಮುಗಿಸಿ ಆಪೀಸಿಗೆ ಬಂದವನೇ ಫೋಟೋ ಕಂಪ್ಯೂಟರ್‌ಗೆ ಹಾಕಿ ಇನ್ನೊಬ್ಬನಿಗೆ ಉಳಿದ ಕೆಲಸವನ್ನೊಪ್ಪಿಸಿ ಧಾವಂತದಿಂದ ಹೊರಬಂದಿದ್ದ.
ತನ್ನ ಮನೆಯ ಗೇಟು ತೆರೆಯುತ್ತಿದ್ದಂತೆ ಯಾಕೋ ಅವನಿಗೆ ಮನೆ ಮುಂದೆ ಸೇರಿದ್ದ ಜನಸಮೂಹವನ್ನು ನೋಡಿ ಗಾಬರಿಯಾಗಿತ್ತು.
ಅಂಗಳಕ್ಕೆ ಬರುತ್ತಿದ್ದಂತೆ ಚಾವಡಿಯಲ್ಲಿ ಬಿಳಿ ಬಟ್ಟೆಯಲ್ಲಿ ಶಾಂತವಾಗಿ ಮಲಗಿದ್ದ ಸುಮಾಳನ್ನು ನೋಡಿ ಬವಳಿ ಬಂದು ಹಾಗೇ ಕಸಿಯುತ್ತಿದ್ದ ಸುರೇಶನಿಗೆ ಯಾರೋ ಹೇಳುತ್ತಿದ್ದುದು ಕೇಳಿಸುತ್ತಿತ್ತು,ಸುರೇಶ ಇನ್ನೂ ಬರ್ಲಿಲ್ಲಾಂತ ತರಕಾರಿ ತರಲು ಹೊರಟ ಸುಮಾಳಿಗೆ ಹಿಂದಿನಿಂದ ಬರುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದು ಅಲ್ಲೇ ತನ್ನ ಕೊನೆಯುಸಿರೆಳೆದಳು...ಹೀಗಂತ ಆ ವ್ಯಕ್ತಿ ಹೇಳುತ್ತಾ ಹೋಗುತ್ತಿದ್ದರೆ ಸುರೇಶನಿಗೆ ಇಹದ ಪರಿವೆಯೇ ಇರಲಿಲ್ಲ.

ಲೋಡ್ ಆಗುತ್ತಿದೆ......