Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ನಾನವರನ್ನೆಲ್ಲಾ ನೋಡಿದೆ ಕಣ್ರೀ..........!!

ಆವತ್ತು ಭಾನುವಾರ ನೋಡಿ, ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಮುಗಿಸ್ಬರುವ ಅಂತ ಹೊರಟಿದ್ದೆ. ನಾನ್ಯಾವತ್ತೂ ಹಾಗೆ ಒಬ್ಬಂಟಿ ಆಗಿ ತಿರುಗೋದು ಜಾಸ್ತಿ. ಇದಕ್ಕೆ ನನ್ನ ದೋಸ್ತಿಗಳು ಒಂಟಿ ಪಿಶಾಚಿ ತರಾ ಅಂತ ಗೇಲಿ ಮಾಡೋದುಂಟು.

ಆ ನಸು ಬೆಳಗಿನ ಹೊತ್ತಲ್ಲಿ ಚಿಪಾಕ್ ಸ್ಟೇಡಿಯಂ ಎದುರು ಒಬ್ಬನೇ ವಾಕ್ ಮಾಡ್ತಾ ಇದ್ದೆ. ಸಡನ್ನಾಗಿ ಎದುರಿನಿಂದ ಯಾರೋ ಓಡ್ಕೊಂಡು ಬರೋ ಹಾಗಿತ್ತು. ಇರ್ಲಿ ಯಾರಾದ್ರೆ ನಂಗೇನು ಅಂತ ನಾ ಮುಂದುವರಿತಾ ಇದ್ರೆ ಅವ ಬಂದು ನಂಗೇ ಡಿಕ್ಕಿ ಹೊಡ್ಯೋದಾ? ನಂಗೆ ತಮಿಳು ಬೇರೆ ಸರ್ಯಾಗಿ ಬರಲ್ಲ ಅರೆ ಬರೆ ಇಂಗ್ಲಿಶಲ್ಲೇ ಬಯ್ಯೋಣಾಂತ ಬಾಯಿ ತೆಗ್ದವ ಹಾಗೇ ಬಾಕಿ!
ಅಯ್ಯೋ ಇವ ನಮ್ಮ ವೀರೂ ಬಾಯ್ ಅಲ್ವಾ? ಅದೇ ಬಾಲರ್ ಗಳಿಗೆ ಡಾಬ್ ಡೀಬ್ ಅಂತ ನೀರು ಕುಡಿಸೋನು? ಯಾವುದಕ್ಕೂ ಇರ್ಲೀ ಅಂತ "ಹಲೋ" ಹೇಳಿ ವಿಶ್ ಮಾಡಿದ್ದಕ್ಕೆ ತನ್ನ ಡಾಬರ್ ಲಾಲ್ ದಂತಪಂಕ್ತಿ ತೋರಿಸ್ಕೊಂಡು ಮುಂದೆ ಹೋದ.

ಅವ ಎಲ್ಲೋದ ಅಂತ ಹಿಂದೆ ನೋಡ್ತೀನಿ, ಅರೆ!! ನಮ್ಮ ಗಂಭೀರಪ್ಪನೂ, ಯುವರಾಜಪ್ಪನೂ ಸೈಕಲ್ ಮೇಲೆ ಟ್ವೆಂಟಿ ಟ್ವೆಂಟಿ ವೇಗದಲ್ಲಿ
ಹೊರಟೇ ಬಿಟ್ರು.. ಹಾಯ್ ಮಾಡಕ್ಕೂ ಪುರುಸೊತ್ತಿಲ್ಲ ಅವ್ರಿಗೆ..

ಛೇ..! ಅಂತ ಮುಂದೆ ನಡೀತೀನಿ.. ಅಲ್ಲೊಂದು ಕಟ್ಟೆ ಫುಟ್ ಪಾತ್ ಮೇಲೆ ಕೂಲಾಗಿ ಕೂತಿದ್ದವ ಯಾರಂತೀರಾ?! ಅದೇ ನಮ್ಮ ವಾಲ್ ದ್ರಾವಿಡ್ ! , ಹಾಯ್ ಅಂತ ಖುಶೀಲಿ ಹೇಳಿದ್ದಕ್ಕೆ ಬೇಕೋ ಬೇಡ್ವೋ ಅಂತ "ಹಾಯ್" ಅಂದ್ಬಿಟ್ಟ ಪುಣ್ಯಾತ್ಮ.

ಸರಿ ಹಾಯ್ ಅಂತ ಹೇಳ್ದ್ರೆ ಅವನ ಗಂಟೇನು ಕರಗುತ್ತಾ ಅಂಥ ಬೈಕ್ಕೊಂಡು ಬಲಕ್ಕೆ ತಿರುಗದ್ರೆ ಉದ್ದಕ್ಕೆ ಕಂಬದ ಹಾಗೆ ಯಾರೋ ನಿಂತ್ಕೊಂಡಿದ್ದಾರಲ್ಲ ಅಂತ ಸೂಕ್ಷ್ಮವಾಗಿ ನೋಡುವಾಗ ಅದೇ ಜಂಬೋ ಜೆಟ್ ಈಚೆ ನನ್ನೆಡೆಗೆ ಮುಖ ಮಾಡಿತ್ತು. ಕುಂಡೆಗೆ ಒಂದು ಬಡ್ಕೊಂಡು ಇವ ನಮ್ ಬೆಂಗ್ಳೂರ್ ಮಾಣಿ ಅಲ್ವಾ ಅಂತ ಗಹಗಹಿಸಿ ನಕ್ಕು "ನಮಸ್ಕಾರ ಅನಿಲಪ್ಪಾ "ಅಂದೆ."ನಮಸ್ಕಾರ" ಅಂದ ಕುಂಬ್ಳೆ ಗೊಗ್ಗರು ದ್ವನಿಯಲ್ಲಿ.

ಇವ ಎಂಥ ನೋಡ್ತಿದ್ದಾನೆ ಹೀಗೆ ಅಂತ ನಾನು ನೋಡಿದ್ರೆ., ಶಾಕ್ ಹೊಡೆಸ್ಕೊಂಡ ಹಾಗಾಯ್ತು. ಹರ್ಭಜನ್-ಶ್ರೀಶಾಂತ್ ಒಬ್ಬ ಬ್ಯಾಟ್ ಒಬ್ಬ ಬೌಲ್ ಹಿಡ್ಕೊಂಡು ಪ್ರಾಕ್ಟೀಸ್ ಮಾಡ್ತಾ ಇದ್ರು. ಎಲಾ ಇವರಾ ಮೊನ್ನೆ ಮೊನ್ನೆ ಭಾರತ-ಪಾಕಿಸ್ತಾನದ್ಹಾಂಗೆ ಕಿತ್ತಾಡ್ಕೊಂಡು ಇದ್ದವರು ಇವತ್ತು ಇಷ್ಟು ಬೇಗ ಒಂದಾದ್ರಾ. ಅಂತ ನಾನು ಮೂಗಿನ ಮೇಲೆ ಬೆರಳಿಟ್ಕೊಂಡೇ ಬಾಕಿ.

ನಂಗೂ ಸುಸ್ತಾಗಿತ್ತು. ಕೂಲ್ ಡ್ರಿಂಕ್ಸ್ ಏನಾದ್ರೂ ಕುಡಿಯೋಣ ಅಂತ ಹೋದ್ರೆ ನನ್ನ ಪುಣ್ಯಕ್ಕೆ ಅಲ್ಲೊಂದು ಗೂಡಂಗಡಿ ಇತ್ತು. ಮಿರಿಂಡ ಬಾಟಲ್ ಒಂದು ತೆಗ್ದು ಬಾಯಿಗಿಡ್ತೇನೆ, ಎದುರಿಗೆ ಸಾಕ್ಷಾತ್ ಸಿಡಿಲ ಮರಿ ಸಚಿನ್! ಹಿಪ್ ಹುರ್ರೇ ಅಂತ ಖುಶಿಗೆ ಒಂದು ಸುತ್ತು ಹಾರಿ "ಹಾಯ್ ಸಚಿನ್!ಅದೇಗೋ ಅಷ್ಟೊಂದು ಸೆಂಚುರಿ ಹೊಡತೀಯಾ?" ಅಂತ ಕೇಳಿದ್ದಕ್ಕೆ, "ಬೂಸ್ಟ್ ಈಸ್ ದ ಸೀಕ್ರೆಟ್ ಓಫ್ ಮೈ ಎನರ್ಜಿ" ಅಂತೇಳಿ ಸಣ್ಣಗೆ ನಕ್ಕ.

ಕೂಲ್ ಡ್ರಿಂಕ್ಸ್ ಕುಡ್ದು ಈಚೆ ಬರ್ತೀನಿ, ಮೂಲೆಯಿಂದ ಯಾರೋ ಥೂ ಥೂ ಅಂತ ಉಗೀತಾ ಇರೋ ಹಾಗನಿಸ್ತು, ನೋಡ್ತೀನಿ ಗಂಗೂಲಿ ಮುಖ ಕೆಂಪಗೆ ಮಾಡ್ಕೊಂಡು ಉಗುರು ಕಚ್ಕೊಳ್ತಾ ಇದ್ದ. ಅವನ ಮುಖ ನೋಡಿ ನಂಗೆ ಹೆದರಿಕೆ ಆಗಿ ಹಾಗೇ ನಡೀತಾ ಇದ್ದೀನಿ..
ಡರ್ ಡರ್ ಅಂತ ಒಂದು ಬೈಕ್ ಶಬ್ದ ಕೇಳಿದ್ರೂ ಯಾರೋ ಇರ್ಬೇಕೂಂತ ನಾನು ತಿರುಗಿ ನೋಡ್ಲಿಲ್ಲ.. ಮತ್ತೆ ಮೈಸೂರ್ ಸ್ಯಾಂಡಲ್ ಸೋಪ್ ಪರಿಮಳ ಜೋರಾದಾಗ ಹಿಂದೆ ನೋಡಿದ್ರೆ... ಮಹೇಂದ್ರ ಸಿಂಗ್ ಧೋನಿ! ನಾನು ಏನಾದ್ರೂ ಹೇಳೋ ಮೊದಲು ಅವನೇ "ಪಿಯೂಶ್ ಚಾವ್ಲಾ ಬೆಳಗ್ಗಿಂದ ಕಾಣಿಸ್ತಾ ಇಲ್ಲ. ಹುಡುಕೋದಕ್ಕೆ ಸ್ವಲ್ಪ ಹೆಲ್ಪ್ ಮಾಡ್ತೀರಾ? ಪ್ರಾಕ್ಟೀಸ್ ಮಾಡ್ಬೇಕುಂದ್ರೆ ಆಗಿಂದ ತಪ್ಪಿಸ್ಕೊಂಡಿದಾನೆ. " ಅನ್ನೋದೇ?

ನಂಗೆ ಫುಲ್ ಶಾಕ್ ಆಗಿ ಸ್ವಲ್ಪ ವಾಸ್ತವಕ್ಕೆ ಬರೋಣಾಂತ ರಪ ರಪ ಅಂತ ಕೆನ್ನೆಗೆ ಎರಡೇಟು ಹಾಕ್ತಾ ಇದ್ರೆ ಯಾರೋ ನನ್ನ ಕೈ ಹಿಡ್ದು ಎಳೀತಾ ಇರೋ ಹಾಗನಿಸ್ತು..
ಜತೆಗೆ "ಎಂಚಿನಾ ಮೂಜಿ ಕಾಸ್ ತಾಲ್ ,ಮನಿಪ್ಪಾಂದೆ ಜೆಪ್ಪರಾಪುಜ್ಜ? ಬೆಳಿಬೆಳಿಗ್ಗೆ ನಿಂದೊಳ್ಳೆ..." ಅಂತ ನನ್ನ ದೋಸ್ತಿಯ ಬೈಗುಳದ ಕಮೆಂಟ್ರಿಗೆ ನಾನು ನಿಜಕ್ಕೂ ವಾಸ್ತವಕ್ಕೆ ಬಂದಿದ್ದೆ...!!

ಹಕ್ಕು ನಿರಾಕರಣೆ